ಟ್ರಿಪ್ಸಿನ್
ಮೇದೋಜೀರಕರಸದಲ್ಲಿ (ಪ್ಯಾನ್‍ಕ್ರಿಯಾಟಿಕ್ ಜ್ಯೂಸ್) ಇರುವ ಒಂದು ಮುಖ್ಯ ಕಿಣ್ವ (ಎನ್eóÉೈಮ್). ಸಾಮಾನ್ಯವಾಗಿ ಎಲ್ಲ ಕಿಣ್ವಗಳಂತೆ ಇದೂ ಒಂದು ಸಸಾರಜನಕ ಪದಾರ್ಥ (ಪ್ರೋಟೀನ್). ಇದನ್ನು ಸ್ಫಟಿಕರೂಪದಲ್ಲಿ ಪಡೆಯಬಹುದು. ಇದು ಆಹಾರಪದಾರ್ಥಗಳಲ್ಲಿರುವ ಪ್ರೋಟೀನ್ ಅಂಶಗಳ ಮೇಲೆ ಪ್ರಭಾವಿಸಿ ಪ್ರೋಟೀನ್ ಬೃಹದಣುಗಳನ್ನು ವಿಭಜಿಸಿ ಅರಗಿಸುವಂಥದ್ದು, ಪ್ರೋಟೀನ್ ಬೃಹದಣುವಿನ ಪಾಲಿಪೆಪ್ಟೈಡ್ ಸರಪಣಿಗಳ ಅಂತ್ಯ ಅಥವಾ ಮಧ್ಯಭಾಗದಲ್ಲಿ ತಮ್ಮ ಕ್ರಿಯೆಯಿಂದ ಅವನ್ನು ವಿಭಜಿಸುವುದರಿಂದ ಟ್ರಿಪ್ಸಿನ್ನನ್ನು ಎನ್‍ಡೋವೆಪ್ಟಿಡೇಸ್ ಎಂಬ ಕಿಣ್ವ ಗುಂಪಿಗೆ ಸೇರಿಸಿದ್ದಾರೆ. ಟ್ರಿಪ್ಸಿನ್ನಿನಿಂದಾಗುವ ಈ ವಿಭಜನೆ ಸರಪಣಿಯ ನಿಶ್ಚಿತ ಪೆಪ್ಟೈಡ್ ಬಂಧಗಳಲ್ಲಿ ಮಾತ್ರ ಕಂಡುಬರುತ್ತದೆ. ಲೈಸಿನ್ ಇಲ್ಲವೇ ಆರ್ಜಿನಿನ್ ಎಂಬ ಅಮೈನೋ ಆಮ್ಲಗಳ ಕಾರ್ಬಾಕ್ಸಿಲ್ ಭಾಗಗಳು ಸರಪಣಿಯ ಕೊಂಡಿಗಳಾಗಿರುವ ಭಾಗದಲ್ಲಿ ಇಂಥ ವಿಚಿತ್ರ ವಿಭಜನೆ ಆಗಿ ಪ್ರೋಟೀನ್ ಬೃಹದಣು ಪಾಲಿಪೆಪ್ಟೈಡುಗಳೆಂಬ ಅನೇಕ ಸಣ್ಣ ತುಂಡುಗಳಾಗುತ್ತವೆ. ಲೈಸಿನ್ ಮತ್ತು ಆರ್ಜಿನಿನ್ನುಗಳ ಬಿಡುಗಡೆ ಆಗುವ ಸಂಭವವೂ ಉಂಟು.

	ಟ್ರಿಪ್ಸಿನ್ನಿನ ಕಾರ್ಯಾಚರಣೆ ಅಲ್ಪಕ್ಷಾರಸ್ವಭಾವದ ಮಾಧ್ಯಮ ಬಹುಸಹಕಾರಿ. Ph 8-9 ಇರುವ ಇಂಥ ಆವರಣ ಮೇದೋಜೀರಕ ರಸದಲ್ಲೇ ಇದ್ದರೂ ಅದು ನಿರ್ಬಲವಾದ, ಜೀರ್ಣಕಾರಿಯಲ್ಲದ ರಸ. ಮೇದೋಜೀರಕಾಂಗದ (ಪ್ಯಾನ್‍ಕ್ರಿಯಾಸ್) ಫಿûಶ್ಚುಲದಿಂದ ನೇರವಾಗಿ ಪಡೆದ ಇಲ್ಲವೇ ಮೇದೋಜೀರಕಾಂಗದ ನಾಳದಿಂದ ಪ್ರಯೋಗಾಲಯದಲ್ಲಿ ನಳಿಕೆ ಹಾಕಿ ಸಂಗ್ರಹಿಸಿದ ಮೇದೋಜೀರಕ ರಸವನ್ನು ಪರೀಕ್ಷಿಸಿದಾಗ ಇದು ವ್ಯಕ್ತವಾಗುತ್ತದೆ. ಆದರೆ ಅಂಥದೇ ಆವರಣವಿರುವ ಸಣ್ಣ ಕರುಳಿನ ಭಾಗವನ್ನು (ಅಂದರೆ ಮುಂಗರುಳು-ಡುಯೋಡಿನಮ್) ಮೇದೋಜೀರಕರಸ ಸೇರಿದಾಗ ಅದು ಪ್ರಬಲ ಜೀರ್ಣಕಾರಿಯಾಗಿ ವರ್ತಿಸುತ್ತದೆ. ಕಾರಣ ಇಷ್ಟೇ. ಮೇದೋಜೀರಕ ರಸದಲ್ಲಿರುವ ಗ್ರಂಥಿಯಿಂದ ನೇರವಾಗಿ ಸ್ರವಿಸಲ್ಪಟ್ಟ ವಸ್ತು ಸುಪ್ತಾವಸ್ಥೆಯಲ್ಲಿರುವ ಮಾತೃಕಿಣ್ವ (ಸೆûೈಮೋಜೆನ್). ಇದರ ಹೆಸರು. ಟ್ರಿಪ್ಸಿನೋಜೆನ್. ಇದು ಸಣ್ಣ ಕರುಳಿನಲ್ಲಿ ಕರುಳಿನರಸದೊಡನೆ (ಇನ್‍ಟೆಸ್‍ಟೈನಲ್ ಜ್ಯೂಸ್) ಸೇರಿದಾಗ ಅದರಲ್ಲಿರುವ ಎನ್‍ಟೆರೋಕೈನೇಸ್ ಎಂಬ ಕಿಣ್ವದ ಪ್ರಭಾವದಿಂದ ಟ್ರಿಪ್ಸಿನ್ನಾಗಿ ಮಾರ್ಪಡುತ್ತದೆ. ಸ್ವಲ್ಪ ಟ್ರಿಪ್ಸಿನ್ ಉತ್ಪತ್ತಿ ಆದಕೂಡಲೇ ಅದೇ ಮಿಕ್ಕ ಟ್ರಿಪ್ಸಿನೋಜೆನ್ನಿನ ಮೇಲೆ ಪ್ರಭಾವಿಸಿ ಅಷ್ಟನ್ನೂ ಟ್ರಿಪ್ಸಿನ್ನಾಗಿ ಪರಿವರ್ತಿಸುತ್ತದೆ. ಅಂದರೆ ಇದು ಒಂದು ಸ್ವಯಂ ಪರಿಣಾಮಕಾರೀ ಕ್ರಮ (ಆಟೋಕೆಟಾಲಿಸಿಸ್) ಎಂದಾಯಿತು. ಟ್ರಿಪ್ಸಿನೋಜೆನ್ ಬೃಹದಣು ಒಂದೇ ಸರಪಣಿಯಿಂದ ಆದುದು. ಟ್ರಿಪ್ಸಿನ್ನಾಗಿ ಪರಿವರ್ತಿತವಾಗುವ ಈ ಸರಪಣಿಯ ಅಂತ್ಯಭಾಗದಲ್ಲಿ ಪೆಪ್ಟೈಡ್ ಕೊಂಡಿ ವಿಭಜಿಸಿ ವ್ಯಾಲಿನ್-ಆಸ್ಪಾರಿಟಿಕ್ ಆಮ್ಲ (4 ಅಣುಗಳು)-ಲೈಸಿನ್ ಹೀಗೆ ಇರುವ ಆರು ಅಮೈನೋ ಆಮ್ಲಗಳ ಪಾಲಿಪೆಪ್ಟೈಡ್ ತುಣುಕು ಬೇರ್ಪಡುತ್ತದೆ. ಬೃಹದಣುವಿನ ಮಿಕ್ಕಭಾಗ ಟ್ರಿಪ್ಸಿನ್. ಆಹಾರ ಪದಾರ್ಥ ಜಠರದಲ್ಲಿ ಭಾಗಶಃ ಜೀರ್ಣಗೊಂಡು ಮುಂಗರಳನ್ನು ಸೇರಿದಾಗ ಇಂಥ ಪರಿವರ್ತನೆ ಅದೇ ಸ್ಥಳದಲ್ಲೆ ಕಂಡುಬರುವುದರಿಂದ ಶರೀರದ ಸಮಂಜಸ ಕಾರ್ಯನಿರ್ವಹಣೆಗೆ ಅವಕಾಶವಾದಂತಾಗುತ್ತದೆ. ದುರ್ಬಲ ಆಮ್ಲತೆಯ ಆವರಣದಲ್ಲೂ ಟ್ರಿಪ್ಸಿನ್ ಕೊಂಚವಾಗಿಯಾದರೂ ಪರಿಣಾಮಕಾರಿಯಾಗಿರುತ್ತದೆ. ಇಂಥ ಆವರಣದಲ್ಲಿ ಅದು ಕುದಿಯುವಷ್ಟು ಉಷ್ಣತೆಯನ್ನೂ ತಡೆದುಕೊಳ್ಳಬಹುದು. ಠಿಊ 2ರಷ್ಟು ಇರುವ ಪ್ರಬಲ ಆಮ್ಲ ಮಾಧ್ಯಮದಲ್ಲೂ ಟ್ರಿಪ್ಸಿನ್ ನಾಶವಾಗುವುದಿಲ್ಲ. ಆದರೆ ಆಮ್ಲ ಮಾಧ್ಯಮದಲ್ಲಿ ಕೆಲಸಮಾಡುವ ಪೆಪ್ಸಿನ್ನಿನಿಂದ ಭಾಗಶಃ ಜೀರ್ಣವಾದ ಆಹಾರದೊಂದಿಗೇ ಸೇರಿ ಜಠರದಿಂದ ಮುಂಗುರುಳನ್ನು ಸೇರುವ ಪೆಪ್ಸಿನ್ ಜೀರ್ಣವಾಗಿ ಬಿಡುವುದು ವ್ಯಕ್ತ. ಟ್ರಿಪ್ಸಿನ್ ಕಾರ್ಯಾಚರಣೆಯ ತರುವಾಯ ಪ್ರೋಟೀನ್ ಇರುವ ವಸ್ತುವಿನಲ್ಲಿ ಕ್ಷಾರ ಸ್ವಭಾವದ ಅಮೈನೋ ಆಮ್ಲಗಳಾದ ಆರ್ಜಿನಿಸ್ ಮತ್ತು ಲೈಸಿನ್ನುಗಳು ಬಿಡುಗಡೆ ಆಗುವುದರಿಂದ ಈ ವಸ್ತುವಿನ ವಾಮಾವರ್ತನೆ (ಲೇವೋರೊಟೇಶನ್) ಕಡಿಮೆ ಆಗುತ್ತದೆ. ಇದು ಜೀರ್ಣಕ್ರಮದಲ್ಲಿ ರಾಸಾಯನಿಕ ರಚನೆಯ ಬದಲಾವಣೆಯನ್ನು ಸೂಚಿಸುತ್ತದೆ. 

	ಟ್ರಿಪ್ಸಿನೋಜೆನ್ನನ್ನು ಚೇತನಗೊಳಿಸಿ ಕ್ರಿಯಾಶಕ್ತಿ ಇರುವ ಕಿಣ್ವವನ್ನಾಗಿಸುವಂತೆಯೇ ಟ್ರಿಪ್ಸಿನ್ ಮೇದೋಜೀರಕ ರಸದಲ್ಲಿರುವ ಇತರ ಕಿಣ್ವಗಳ ಮಾತೃವಸ್ತುಗಳನ್ನೂ ಚುರುಕುಗೊಳಿಸುತ್ತದೆ. ಕೈಮೋಟ್ರಿಪ್ಸಿನೋಜೆನ್, ಪ್ರೊಕಾರ್ಬಾಕ್ಸಿ ಪೆಪ್ಟಿಡೇಸ್ ಎಂಬ ಈ ಮೂಲವಸ್ತುಗಳು ಪರಿವರ್ತಿತವಾಗಿ ಕೈಮೋಟ್ರಿಪ್ಸಿನ್ ಮತ್ತು ಕಾರ್ಬಾಕ್ಸಿಪೆಪ್ಟಿಡೇಸ್ ಎಂಬ ಪ್ರೋಟೀನ್ ವಿಭಜನಾಕ್ರಿಯೆಯುಳ್ಳ ಕಿಣ್ವಗಳಾಗುತ್ತವೆ. ಕೈಮೋಟ್ರಿಪ್ಸಿನ್ನು ಪ್ರೋಟೀನ್ ಪಾಲಿಪೆಪ್ಟೈಡ್ ಸರಪಣಿಗಳಲ್ಲಿ ಆರೋಮ್ಯಾಟಿಕ್ ಅಮೈನೋ ಆಮ್ಲಗಳಿರುವ ಸ್ಥಳದಲ್ಲಿ ಬಂಧನವನ್ನು ಒಡೆಯುತ್ತದೆ. ಕಾರ್ಬಾಕ್ಸಿಪೆಪ್ಟಿಡೇಸು ಸಣ್ಣ ಪೆಪ್ಟೈಡ್ ಸರಪಣಿಗಳಿಂದ  ಅಂತ್ಯಶೇಷಗಳನ್ನು ಜಾಗ್ರತೆಯಾಗಿ ಬಿಡುಗಡೆ ಮಾಡುತ್ತದೆ. ಹೀಗೆ ಇವುಗಳ ಕೆಲಸ ಪರಸ್ಪರ ಸಹಾಯಕವಾಗಿರುತ್ತದೆ.

	ಟ್ರಿಪ್ಸಿನ್ನು ಸಹಜ ಪ್ರೋಟೀನುಗಳ ಮೇಲೆ (ನೇಟಿವ್ ಪ್ರೋಟೀನ್ಸ್) ಕೆಲಸ ಮಾಡಲಾರದು. ಆದರೆ ಉಷ್ಣ ಮುಂತಾದವುಗಳಿಂದ ಬದಲಾವಣೆಗೊಂಡ ಪ್ರೋಟೀನುಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ; ಅಂತೆಯೇ ಪೆಪ್ಸಿನ್ನಿನಿಂದ ಭಾಗಶಃ ಜೀರ್ಣಿಸಲ್ಪಟ್ಟ ಪ್ರೋಟೀನುಗಳ ಮೇಲೂ ಸೋಯಬೀನ್ಸ್, ಕಡಲೆಕಾಯಿ, ಹುರುಳಿ ಮುಂತಾದ ಕೆಲವು ಬೀಜಗಳಲ್ಲಿ ಟ್ರಿಪ್ಸಿನ್ನಿನ ಕೆಲಸವನ್ನು ತಡೆಗಟ್ಟುವ ಕೆಲವು ವಿರೋಧಕಗಳು (ಇನ್‍ಹಿಬಿಟರ್ಸ್) ಇರುತ್ತವೆ. ಆದರೆ ಇವು ಬೇಯಿಸಿದಾಗ ನಾಶಹೊಂದುವುದರಿಂದ ಮೇದೋಜೀರಕ ರಸದ ನೈಸರ್ಗಿಕ ಜೀರ್ಣ ಶಕ್ತಿಗೆ ಕುಂದಾಗುವುದಿಲ್ಲ.
(ವೈ.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ